Wednesday, July 23, 2025

ಮೂಡುವನು ರವಿ ಮೂಡುವನು

’ಉದಯರಾಗ’ - ಪಂಜೆ ಮಂಗೇಶರಾಯರು  


ಮೂಡುವನು ರವಿ ಮೂಡುವನು ಕತ್ತಲೊಡನೆ ಜಗಳಾಡುವನು

ಮೂಡಣ ರಂಗಸ್ಥಳದಲಿ ನೆತ್ತರು ಮಾಡುವನು ಕುಣಿದಾಡುವನು


ಬೆಳಕಿನ ಕಣ್ಣುಗಳಿ೦ದಾ ಸೂರ್ಯನು ನೋಡುವನು ಬಿಸಿಲೂಡುವನು

ಚಿಲಿಪಿಲಿ ಹಾಡನು ಹಾಡಿಸಿ ಹಕ್ಕಿಯ ಗೂಡಿನ ಹೊರ ಹೊರ ದೂಡುವನು


ಬಂಗಾರದ ಚೆಲು ಬಿಸಿಲ ಕಿರೀಟದ ಶೃಂಗಾರದ ತಲೆ ಎತ್ತುವನು

ತೆಂಗಿನ ಕಂಗಿನ ತಾಳೆಯ ಬಾಳೆಯ ಅಂಗಕೆ ರಂಗನು ಮೆತ್ತುವನು


ಮಾಡಿನ ಹುಲ್ಲಲಿ ಚಿನ್ನದ ಗೆರೆಯನು ಎಳೆಯುವನು ರವಿ ಹೊಳೆಯುವನು

ಕೂಡಲೆ ಕೋಣೆಯ ಕತ್ತಲೆ ಕೊಳೆಯನು ತೊಳೆಯುವನು ರವಿ ಹೊಳೆಯುವನು


ಮಲಗಿದ ಕೂಸಿನ ನಿದ್ದೆಯ ಕಸವನು ಗುಡಿಸುವನು ಕಣ್ ಬಿಡಿಸುವನು

ಹುಲುಗಿಡ ಹೂವಿಗೆ ಪರಿ ಪರಿ ಬಣ್ಣವ ಉಡಿಸುವನು ಹನಿ ತೊಡಿಸುವನು


ಏರುವನು ರವಿ ಏರುವನು ಬಾನೊಳು ಸಣ್ಣಗೆ ತೋರುವನು

ಏರಿದವನು ಚಿಕ್ಕವನಿರಬೇಕೆಲೆ ಎಂಬಾ ಮಾತನು ಸಾರುವನು


ಕಾಮನಬಿಲ್ಲು ಕಮಾನು ಕಟ್ಟಿದೆ

 ಕಾಮನಬಿಲ್ಲು ಕಮಾನು ಕಟ್ಟಿದೆ

ಮೋಡದ ನಾಡಿನ ಬಾಗಿಲಿಗೆ !


ಬಣ್ಣಗಳೇಳನು ತೋರಣ ಮಾಡಿದೆ

ಕಂದನ ಕಣ್ಣಿಗೆ ಚೆಂದವನೂಡಿದೆ !


ಹಣ್ಣಿನ ಹೂವಿನ ಹೊನ್ನನು ಕೂಡಿದೆ

ಮಕ್ಕಳಿಗೋಕುಳಿಯಾಟವನೂಡಿದೆ !


ತೆಂಗಿನ ತೋಟದ ಬುಡದಲಿ ಮೂಡಿದೆ

ಭೂಮಿಗೆ ಬಾನಿಗೆ ಸೇತುವೆ ಹೂಡಿದೆ !


ಕಾಮನಬಿಲ್ಲು ಕಮಾನು ಕಟ್ಟಿದೆ

ಮೋಡದ ನಾಡಿನ ಬಾಗಿಲಿಗೆ !

-- ಕುವೆಂಪು

ಕನ್ನಡಕೆ ಹೋರಾಡು - ಕುವೆಂಪು

ಸಾಹಿತ್ಯ: ಕುವೆಂಪು


ಕನ್ನಡಕೆ ಹೋರಾಡು

ಕನ್ನಡದ ಕಂದಾ;

ಕನ್ನಡವ ಕಾಪಾಡು

ನನ್ನ ಆನಂದಾ!


ಜೋಗುಳದ ಹರಕೆಯಿದು

ಮರೆಯದಿರು, ಚಿನ್ನಾ;

ಮರೆತೆಯಾದರೆ ಅಯ್ಯೊ

ಮರೆತಂತೆ ನನ್ನ!


ಮೊಲೆಯ ಹಾಲೆಂತಂತೆ

ಸವಿಜೇನು ಬಾಯ್ಗೆ;

ತಾಯಿಯಪ್ಪುಗೆಯಂತೆ

ಬಲುಸೊಗಸು ಮೆಯ್ಗೆ;


ಗುರುವಿನೊಳ್ನುಡಿಯಂತೆ

ಶ್ರೇಯಸ್ಸು ಬಾಳ್ಗೆ;

ತಾಯ್ನುಡಿಗೆ ದುಡಿದು ಮಡಿ,

ಇಹಪರಗಳೇಳ್ಗೆ!


ರನ್ನ ಪಂಪರ ನಚ್ಚು

ಕನ್ನಡದ ಸೊಲ್ಲು;

ಬಸವದೇವನ ಮೆಚ್ಚು,

ಹರಿಹರನ ಗೆಲ್ಲು;


ನಾರಣಪ್ಪನ ಕೆಚ್ಚು

ಬತ್ತಳಿಕೆ ಬಿಲ್ಲು;

ಕನ್ನಡವ ಕೊಲುವ ಮುನ್

ಓ ನನ್ನ ಕೊಲ್ಲು!


ನೆವವು ಏನಾದರೇನ್,

ಹೊರನುಡಿಯು ಹೊರೆಯೈ;

ನಿನ್ನ ನಾಡೊಡೆಯ ನೀನ್;

ವೈರಿಯನು ತೊರೆಯೈ.


ಕನ್ನಡದ ನಾಡಿನಲಿ

ಕನ್ನಡವ ಮೆರೆಯೈ;

ತಾಯ್ಗಾಗಿ ಹೋರಾಡಿ

ತಾಯ್ನುಡಿಯ ಪೊರೆಯೈ!


ಕನ್ನಡಕೆ ಬಂದಿಳಿಕೆ

ಹಿಡಿಯುತಿಹುದಿಂದು;

ನೀ ನಿದ್ದೆ ಮಾಡಿದರೆ

ಹಾಕುವುದು ಕೊಂದು!


ಎದ್ದೇಳೊ, ಕಂದಯ್ಯ,

ಕತ್ತಿಯನು ಕೊಳ್ಳೊ!

ತಳಿರು ವೇಷದ ರೋಗ

ಬಂದಿಳಿಕೆ, ತಳ್ಳೊ!


ದಮ್ಮಯ್ಯ, ಕಂದಯ್ಯ,

ಬೇಡುವೆನು ನಿನ್ನ;

ಕನ್ನಡಮ್ಮನ ಹರಕೆ,

ಮರೆಯದಿರು, ಚಿನ್ನಾ!


ಮರೆತೆಯಾದರೆ ಅಯ್ಯೊ,

ಮರೆತಂತೆ ನನ್ನ;

ಹೋರಾಡು ಕನ್ನಡಕೆ

ಕಲಿಯಾಗಿ, ರನ್ನಾ!


ಮೂಡುವನು ರವಿ ಮೂಡುವನು

’ಉದಯರಾಗ’ -  ಪಂಜೆ ಮಂಗೇಶರಾಯರು   ಮೂಡುವನು ರವಿ ಮೂಡುವನು ಕತ್ತಲೊಡನೆ ಜಗಳಾಡುವನು ಮೂಡಣ ರಂಗಸ್ಥಳದಲಿ ನೆತ್ತರು ಮಾಡುವನು ಕುಣಿದಾಡುವನು ಬೆಳಕಿನ ಕಣ್ಣುಗಳಿ೦ದಾ ಸೂರ್ಯನು...